ಬೆತ್ಲೆಹೆಮ್
ಜಾರ್ಡನ್ ದೇಶದ ಒಂದು ಮುಖ್ಯ ಪಟ್ಟಣ.  ಕ್ರಿಸ್ತನ ಜನ್ಮಸ್ಥಳವೆಂದು ಪ್ರಸಿದ್ಧಿ.  ಜೆರೂಸಲೆಮ್ ನಗರದ ನೈರುತ್ಯದಲ್ಲಿ ಸುಮಾರು 8 ಕಿಮೀದೂರದಲ್ಲಿದೆ.  ಜನಸಂಖ್ಯೆ 16,313 (1971) ಇಲ್ಲಿ ಅನೇಕ ಕ್ರಿಶ್ಚಿಯನ್ ಮಿಷನರಿ ಶಾಲೆಗಳು ಹಾಗೂ ದತ್ತಿ ಸಂಸ್ಥೆಗಳು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು ಬೆತ್ಲೆಹೆಮ್ ಕ್ರಿಶ್ಚಿಯನ್ ಧರ್ಮದ ಒಂದು ಕೇಂದ್ರವಾಗಿದೆ.  ಈ ಪಟ್ಟಣದಲ್ಲಿ ಮುಸ್ಲಿಮರಿಗಿಂತಲೂ ಕ್ರಿಶ್ಚಿಯನ್ನರು ಅಧಿಕ ಸಂಖ್ಯೆಯಲ್ಲಿದ್ದಾರೆ.  ಇತ್ತೀಚಿನ ದಿನಗಳಲ್ಲಿ ಈ ಪಟ್ಟಣವನ್ನು ಆಧುನೀಕರಿಸಲಾಗಿದ್ದು ಸುಂದರ ಕಟ್ಟಡಗಳು, ಆಲಿವ್ ಮರದ ತೋಪುಗಳು, ದ್ರಾಕ್ಷಿತೋಟಗಳು ಎಲ್ಲೆಲ್ಲೂ ಕಂಡುಬರುತ್ತವೆ.  ಈ ಪಟ್ಟಣ ಒಂದು ಪ್ರಮುಖ ಮಾರುಕಟ್ಟೆ.  ಇಲ್ಲಿಯ ಜನರು ಮರ ಕೆತ್ತನೆ ಹಾಗೂ ಧಾರ್ಮಿಕ ಕೆತ್ತನೆಯ ವಸ್ತುಗಳೇ ಮೊದಲಾದವನ್ನು ನಿರ್ಮಿಸುವ ಕುಶಲ ಕೆಲಸಗಾರರು.  ಬೆತ್ಲೆಹೆಮ್ ಅನೇಕ ಯಾತ್ರಿಗಳ ಹಾಗೂ ಪ್ರೇಕ್ಷಕರ ಒಂದು ಪ್ರಮುಖ ಪ್ರವಾಸೋದ್ಯಮ ಕೇಂದ್ರ.  ಈ ಪಟ್ಟಣದ ಸುತ್ತಲಿನ ಫಲವತ್ತಾದ ಪ್ರದೇಶದಲ್ಲಿ ವಿವಿಧ ಧಾನ್ಯಗಳನ್ನೂ ಆಲಿವ್ ಮರಗಳನ್ನೂ ಬೆಳೆಯಲಾಗುತ್ತಿದೆ.  ಇಲ್ಲಿ ತಯಾರಾಗುವ ದ್ರಾಕ್ಷಾರಸ ಬಲು ಪ್ರಸಿದ್ಧಿ.  ಇಲ್ಲಿಯ ಜನರ ಆದಾಯದ ಪ್ರಮುಖ ಮೂಲವೆಂದರೆ, ಕಸೂತಿ ಹಾಗೂ ಕೆತ್ತನೆಯ ಕೆಲಸ ಮತ್ತು ಧಾರ್ಮಿಕ ವೃತ್ತಿಗಳು.  

	ಬೆತ್ಲೆಹೆಮ್ ಪಟ್ಟಣಕ್ಕೆ ಡೇವಿಡ್ ದೊರೆಯ ಕಾಲದಲ್ಲಿ ಕೋಟೆ ಕಟ್ಟಲಾಯಿತು.  ಮುಂದೆ ಈ ಪಟ್ಟಣ ಗ್ರೀಕ್ ರೋಮನ್ ಮತ್ತು ಅರಬ್ ಮುಸ್ಲಿಮರ ಆಳ್ವಿಕೆಗೆ ಒಳಗಾಯಿತು.  ಕ್ರಿ.ಶ. 1000 ದಲ್ಲಿ ಕ್ರಿಶ್ಷಿಯನ್ನರು ಧರ್ಮ ಯುದ್ಧ ಮಾಡಿ (ಕ್ರುಸೇಡ್) ಬೆತ್ಲೆಹೆಮ್ಮನ್ನು ತಮ್ಮ ವಶಕ್ಕೆ ತೆಗೆದುಕೊಂಡರು.  ಮುಂದೆ ಟರ್ಕಿ ಮುಸಲ್ಮಾನರ ಆಡಳಿತಕ್ಕೆ ಒಳಪಟ್ಟಿತು.  1500ರಲ್ಲಿ ಒಟ್ಟೊಮಾನ್ ಟರ್ಕರು ಈ ಪ್ರದೇಶದ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದರು.  ಒಂದನೆಯ ಮಹಾಯುದ್ಧದ ಕಾಲದಲ್ಲಿ (1917) ಬ್ರಿಟಿಷರು ಬೆತ್ಲೆಹೆಮ್ಮನ್ನು ತಮ್ಮ ವಶಕ್ಕೆ ತೆಗೆದುಕೊಂಡರು.  1923-48ರ ತನಕ ಪ್ಯಾಲಿಸ್ಟೈನಿನ ನಿಯಂತ್ರಣಕ್ಕೆ ಸೇರಿತ್ತು.  1948ರಿಂದ ಜಾರ್ಡನ್ ದೇಶದ ಒಂದು ಪಟ್ಟಣವಾಯಿತು.  

	ಇಲ್ಲಿಯ ಏಸುಕ್ರಿಸ್ತನ ಜನ್ಮಸ್ಥಳದ ಮೇಲೆ (ಕ್ರಿ.ಪೂ. 326 ಕಟ್ಟಿರುವ ಪ್ರಸಿದ್ಧ ಚರ್ಚಿದೆ) ಇದು ಬೆತ್ಲೆಹೆಮ್ ಪಟ್ಟಣದ ಪ್ರಮುಖ ಆಕರ್ಷಣೆ.  ಇದರ ದಕ್ಷಿಣ ಭಾಗದಲ್ಲಿರುವ ಏಸುಕ್ರಿಸ್ತನನ್ನು ಶಿಲುಬೆಗೆ ಏರಿಸುತ್ತಿರುವ ಅಮೃತ ಶಿಲೆಯ ಕೆತ್ತನೆ ಬಲು ಮನೋಹರವಾಗಿದೆ.  ಈ ಮಹಾ ಚರ್ಚಿನ ಅಕ್ಕಪಕ್ಕದಲ್ಲಿ ರೋಮನ್ನರ ಗ್ರೀಕರ ಹಾಗೂ ಆರ್ಮೇನಿಯನ್ನರ ಚರ್ಚುಗಳೂ ಇವೆ.		
(ಪಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ